ಕಲಿಕೆಯ ಅಳತೆ

ಮಕ್ಕಳ ಸರ್ವತೋಮುಖವಾದ ವಿಕಾಸಕ್ಕೆ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯ, ಅವರ ಶಿಕ್ಷಣದ ಸ್ವರೂಪ ಮತ್ತು ಬೋಧನೆಯ ಕ್ರಮ, ಅವರ ಮನೆಯ ಸಂಸ್ಕøತಿಯ ಮಟ್ಟ, ಅವರ ಉದ್ಯೋಗಶೀಲತೆ, ಅವರಿಗೆ ದೊರೆಯುವ ಸಾಮಾಜಿಕ ಅನುಕೂಲಗಳು, ಅವರ ಭಾವಜೀವನದ ಸ್ವರೂಪ ಇವೆಲ್ಲ ಕಾರಣವಾದರೂ ಅವೆಲ್ಲಕ್ಕಿಂತ ಹೆಚ್ಚಿನ ಪ್ರಭಾವ ಬೀರುವುದು ಅವರ ಬುದ್ಧಿ. ಅಂದರೆ ಮಕ್ಕಳ ಬುದ್ಧಿಯ ಮಟ್ಟ ಅವರು ಯಾವ ವಿಷಯಗಳನ್ನು ಎಷ್ಟರಮಟ್ಟಿಗೆ ಕಲಿಯ ಬಲ್ಲರು ಎಂಬುದನ್ನು ಬಹುಮಟ್ಟಿಗೆ ನಿರ್ಧರಿಸುತ್ತದೆ. ಆದ್ದರಿಂದಲೇ ಬುದ್ಧಿಯನ್ನು ಕಲಿಯುವ ಶಕ್ತಿ ಎಂದೂ ಕರೆಯುತ್ತಾರೆ.

ಬುದ್ಧಿಯ ಅಳತೆ: ಬುದ್ಧಿಯನ್ನು ಅಳೆಯುವ ಸಾಧನವನ್ನು ಮೊಟ್ಟಮೊದಲು ಫ್ರಾನ್ಸಿನ ವಿಜ್ಞಾನಿ ಬೀನೆ ರೂಪಿಸಿದ. ಮಕ್ಕಳ ಬುದ್ಧಿ ಅವರ ದೈಹಿಕ ವಯಸ್ಸಿಗೆ (ಕ್ರಾನೊಲಾಜಿಕಲ್ ಏಜ್) ಅನುಗುಣವಾಗಿರುತ್ತದೆ; ಸಾಧಾರಣ ಬುದ್ಧಿಶಕ್ತಿಯಿರುವ ಒಂದೇ ವಯಸ್ಸಿನ ಮಕ್ಕಳು ಕೆಲವು ಶಿಷ್ಟೀಕೃತ (ಸ್ಟಾಂಡರ್ಡೈಸ್ಡ್) ಪ್ರಶ್ನೆಗಳನ್ನು ಉತ್ತರಿಸಬಲ್ಲರು_ಎಂಬುದನ್ನು ಬೀನೆ ಅನುಭವದಿಂದಲೂ ಪ್ರಯೋಗಗಳಿಂದಲೂ ಕಂಡುಹಿಡಿದು, ಆ ಮೂಲಕ ಮಕ್ಕಳ ಬುದ್ಧಿಶಕ್ತಿಯ ವಯಸ್ಸನ್ನು ನಿರ್ಧರಿಸಲು ಯತ್ನಿಸಿದ. ಒಬ್ಬ ಹುಡುಗನ ದೈಹಿಕ ವಯಸ್ಸು 10 ಇರಬಹುದು. ಆದರೆ ಆತ 12 ವರ್ಷ ವಯಸ್ಸಿನ ಸರಾಸರಿ ಮಟ್ಟದ ಮಕ್ಕಳಿಗಾಗಿ ನಿಯತವಾದ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಡಬಹುದು. ಹಾಗಾದರೆ ಅವನ ಮಾನಸಿಕ (ಮೆಂಟಲ್) ವಯಸ್ಸು 12 ಆಗುತ್ತದೆ. ಬುದ್ಧಿಯ ಮಟ್ಟ ನಿರ್ಧರಿಸಲು ಮಾನಸಿಕ ವಯಸ್ಸನ್ನು ದೈಹಿಕ ವಯಸ್ಸಿನಿಂದ ಭಾಗಿಸಿ, ನೂರರಿಂದ ಗುಣಿಸಬೇಕು (ದಶಮಾಂಶ ನಿವಾರಣೆಗಾಗಿ). ಇದೇ ಬುದ್ಧಿಲಬ್ದ ಅಥವಾ ಬುದ್ಧಿಪ್ರಮಾಣ (ಐ.ಕ್ಯೂ.).

ಬುದ್ಧಿಲಬ್ದ (ಐ.ಕ್ಯೂ.) = ಮಾನಸಿಕ ವಯಸ್ಸು (x) 100

   ದೈಹಿಕ ವಯಸ್ಸು

ಈ ಮಾನದ ಪ್ರಕಾರ 99 ರಿಂದ 110ರ ವರೆಗೆ ಐ.ಕ್ಯೂ. ಉಳ್ಳವರು ಸಾಧಾರಣ ಬುದ್ಧಿವಂತರು. 110 ರಿಂದ 130ರ ವರೆಗೆ ಐ.ಕ್ಯೂ. ಉಳ್ಳವರು ಉತ್ತಮ ಬುದ್ಧಿಯವರು. 130 ಕ್ಕಿಂತ ಹೆಚ್ಚು ಉಳ್ಳವರು ಪ್ರತಿಭಾವಂತರು. 70 ರಿಂದ 90ರ ವರೆಗೆ ಐ.ಕ್ಯೂ. ಉಳ್ಳವರು ಕಡಿಮೆ ಬುದ್ಧಿಯವರು. ಇವರು ನಿಧಾನವಾಗಿ ಕಲಿಯುವರು. 50 ರಿಂದ 70ರ ವರೆಗೆ ಐ.ಕ್ಯೂ. ಉಳ್ಳವರು ಮಂದ ಬುದ್ಧಿಯವರು. ಇವರು ಸಾಧಾರಣ ಶಿಕ್ಷಣವನ್ನೂ ಕೈಕೆಲಸವನ್ನೂ ಕಲಿಯಬಲ್ಲರು. 20 ರಿಂದ 50ರ ವರೆಗೆ ಐ.ಕ್ಯೂ. ಇದ್ದವರು ತೀರ ಮಂಕು. ಇವರು ಬಹುಪ್ರಯಾಸದಿಂದ ಸಣ್ಣಪುಟ್ಟ ಕೆಲಸ ಕಲಿಯಬಲ್ಲರು; ವಿದ್ಯಾಭ್ಯಾಸ ಇವರಿಗೆ ಅಸಾಧ್ಯ. 20ಕ್ಕೂ ಕಡಿಮೆ ಐ.ಕ್ಯೂ. ಉಳ್ಳವರು ಪೆದ್ದರು. ಇವರು ಕಲಿಯುವುದು ಹಾಗಿರಲಿ, ತಮ್ಮ ಅಂಗರಕ್ಷಣೆಯನ್ನು ಸಹ ಮಾಡಿಕೊಳ್ಳಲಾರರು. ಇವರು ಯಾವಾಗಲೂ ಒಂದು ಸಂಸ್ಥೆಯ ರಕ್ಷಣೆಗೆ ಒಳಪಟ್ಟಿರಬೇಕು.

ಶಿಕ್ಷಣಾಭಿವೃದ್ಧಿಯ ಅಳತೆ: ವಿದ್ಯಾರ್ಥಿಗಳು ಶಿಕ್ಷಣದಿಂದ ಎಷ್ಟರ ಮಟ್ಟಿಗೆ ಪ್ರಯೋಜನ ಹೊಂದಿರುವರೆಂಬುದನ್ನು ಅವರು ಪರೀಕ್ಷೆಗಳಲ್ಲಿ ಗಳಿಸಿರುವ ಅಂಕಗಳಿಂದ ನಿರ್ಧರಿಸಬಹುದು. ಇತ್ತೀಚೆಗೆ ನಿಯತವಾದ ನೂತನ ಪರೀಕ್ಷೆಗಳಿಂದ ಶಿಕ್ಷಣಾಭಿವೃದ್ಧಿಯ ಮಟ್ಟವನ್ನು ಶಿಕ್ಷಣದ ವಯಸ್ಸಿನ ಮಾನದಲ್ಲಿ ಕಂಡುಹಿಡಿದು ಅದನ್ನು ದೈಹಿಕ ವಯಸ್ಸಿನಿಂದ ಭಾಗಿಸಿ ನೂರರಿಂದ ಗುಣಿಸುತ್ತಾರೆ. ಇದೇ ಶಿಕ್ಷಣಲಬ್ಧ (ಐ.ಕ್ಯೂ.)

ಶಿಕ್ಷಣಲಬ್ಧ (ಐ.ಕ್ಯೂ.) = ಶಿಕ್ಷಣ ವಯಸ್ಸು ( ) 100

  ದೈಹಿಕ ವಯಸ್ಸು

ಇದರ ಪ್ರಕಾರ 90 ರಿಂದ 110ರ ವರೆಗೆ ಐ.ಕ್ಯೂ. ಇದ್ದರೆ ಅವರ ಶಿಕ್ಷಣಾಭಿವೃದ್ಧಿ ಸಾಧಾರಣ ಎಂದೂ 110ಕ್ಕಿಂತ ಹೆಚ್ಚಾಗಿದ್ದರೆ ಅವರ ಶಿಕ್ಷಣ ಉತ್ತಮ ಎಂದೂ 90ಕ್ಕಿಂತ ಕಡಿಮೆ ಇದ್ದರೆ ಅದು ಕೆಳಗಿನ ಮಟ್ಟದ್ದು ಎಂದೂ ನಿರ್ಧರಿಸಬಹುದು.

ಕಲಿಕೆಯ ಅಳತೆ: ಮೇಲೆ ಹೇಳಿರುವಂತೆ ಮಕ್ಕಳ ಶಿಕ್ಷಣ ಮಟ್ಟ ಅವರ ಬುದ್ಧಿಯ ಮಟ್ಟವನ್ನು ಬಹಳಮಟ್ಟಿಗೆ ಅವಲಂಬಿಸಿರುತ್ತದೆ. ಮಕ್ಕಳು ಅವರ ಬುದ್ಧಿ ಶಕ್ತಿಗೆ ಅನುಗುಣವಾಗಿ ಶಿಕ್ಷಣಾಭಿವೃದ್ಧಿ ಹೊಂದುತ್ತಿದ್ದಾರೆಯೆ ಎಂಬುದನ್ನು ಕಂಡುಹಿಡಿಯಲು ಇದು ನೆರವಾಗುತ್ತದೆ. ಶಿಕ್ಷಣಲಬ್ಧವನ್ನು ಬುದ್ಧಿಲಬ್ಧದಿಂದ ಭಾಗಿಸಿ ಅದನ್ನು ನೂರದಿಂದ ಗುಣಿಸಿದರೆ ದೊರಕುವುದೇ ಸಾಧನಾಲಬ್ಧ (ಅಚೀವ್ ಮೆಂಟ್ ಕ್ವೋಷೆಂಟ್ (ಐ.ಕ್ಯೂ.)

ಸಾಧನಾಲಬ್ಧ (ಐ.ಕ್ಯೂ.) = ಶಿಕ್ಷಣಲಬ್ಧ ( ) 100

    ಬುದ್ಧಿಲಬ್ದ

ಅಥವಾ   ಶಿಕ್ಷಣ ವಯಸ್ಸು ( ) 100

ಮಾನಸಿಕ ವಯಸ್ಸು

ಒಬ್ಬ ವ್ಯಕ್ತಿಯ ಎ.ಕ್ಯೂ. 90 ರಿಂದ 110ರ ವರೆಗಿದ್ದರೆ ಆತ ತನ್ನ ಬುದ್ಧಿಗೆ ಅನುಗುಣವಾಗಿ ಶಿಕ್ಷಣಾಭಿವೃದ್ಧಿ ಹೊಂದುತ್ತಿದ್ದಾನೆ ಎಂದು ತಿಳಿಯಬೇಕು. ಅವನ ಐ.ಕ್ಯೂ. 110 ಕ್ಕಿಂತ ಹೆಚ್ಚಾಗಿದ್ದರೆ, ಆ ವ್ಯಕ್ತಿ ತನ್ನ ಬುದ್ಧಿಗೆ ಮೀರಿ ಶಿಕ್ಷಣಾಭಿವೃದ್ಧಿ ಹೊಂದುತ್ತಿದ್ದಾನೆಂದು ವ್ಯಕ್ತವಾಗುತ್ತದೆ. ಹೀಗೆ ಶಕ್ತಿಮೀರಿ ಕೆಲಸ ಮಾಡುವುದು ಕೆಲವು ವೇಳೆ ಆ ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಕುಂದಾಗಬಹುದು. ಇಂಥ ಸಂದರ್ಭದಲ್ಲಿ ಉಪಾಧ್ಯಾಯರು ಸೂಕ್ತ ಮಾರ್ಗದರ್ಶನ ನೀಡಬೇಕು. ಎ.ಕ್ಯೂ. 90ಕ್ಕಿಂತ ಕಡಿಮೆಯಾಗಿದ್ದರೆ ಆ ವ್ಯಕ್ತಿ ತನ್ನ ಬುದ್ಧಿಗಿಂತ ಕಡಿಮೆ ಶಿಕ್ಷಣಾಭಿವೃದ್ಧಿ ಹೊಂದುತ್ತಿದ್ದಾನೆಂದು ಅರ್ಥ. ಅಂದರೆ ಆವ್ಯಕ್ತಿಗೆ ಕಲಿಯುವ ಶಕ್ತಿ ಇದೆ. ಆದರೆ ಆತ ಆ ಶಕ್ತಿಯನ್ನು ಪೂರ್ಣವಾಗಿ ಉಪಯೋಗಿಸುತ್ತಿಲ್ಲ. ಇದಕ್ಕೆ ಅನೇಕ ಕಾರಣಗಳಿರಬಹುದು. ಶಿಕ್ಷಕರು ಕಾರಣಗಳನ್ನು ಕಂಡುಹಿಡಿದು ಈ ನ್ಯೂನತೆಯನ್ನು ಕಡಿಮೆ ಮಾಡಲು ಎಲ್ಲ ಪ್ರಯೋಗಗಳನ್ನೂ ಮಾಡಬೇಕು.   

 (ಸಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ